ಗ್ರೇಷಿಯನ್ -
	359 - 383. ರೋಮನ್ ಚಕ್ರವರ್ತಿ (367 - 383). ವ್ಯಾಲೆಂಟಿನಿಯನನ ಮಗ. ಪೆನೋನಿಯದ (ಈಗಿನ ಹಂಗರಿ, ಯೂಗೋಸ್ಲಾವಿಯಗಳ ಭಾಗ) ಸಿರ್ಮಿಯಮಿನಲ್ಲಿ ಹುಟ್ಟಿದ. ವ್ಯಾಲೆಂಟಿನಿಯನನಿಗೆ ಕಾನ್‍ಸ್ಟೆಂಟಿನ ಮತ್ತು ಜಸ್ಟಿನ ಎಂಬ ಇಬ್ಬರು ರಾಣಿಯರಿದ್ದರು. ಗ್ರೇಷಿಯನ್ ಕಾನ್‍ಸ್ಟೆಂಟಿನಳ ಮಗ. 2ನೆಯ ವ್ಯಾಲೆಂಟಿಯನ್ ಜಸ್ಟಿನಳ ಮಗ. ಇವರಿಬ್ಬರೂ ಅನಂತರ ರೋಂ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಿಗೆ ಚಕ್ರವರ್ತಿಗಳಾದರು.

	ವ್ಯಾಲೆಂಟಿನಿಯನ್ ಗ್ರೇಷಿಯನನ್ನು 367ರಲ್ಲಿ ಆಗಸ್ಟಸ್ ಎಂದು ಘೋಷಿಸಿದ. ಆಸೋನಿಯಸನಿಂದ ಶಿಕ್ಷಣ ಕೊಡಿಸಿದ. ಗ್ರೇಷಿಯನ್ 374ರಲ್ಲಿ 2ನೆಯ ಕಾನ್ಸ್ಟಾಂಟಿಯಸನ ಮಗಳಾದ ಹನ್ನೆರಡು ವರ್ಷ ವಯಸ್ಸಿನ ಕಾನ್ಸ್ಟಾಂಷಿಯಳನ್ನು ವಿವಾಹವಾದ. ಮರುವರ್ಷ ವ್ಯಾಲೆಂಟಿಯನ್ ಮರಣ ಹೊಂದಿದ. ಗ್ರೇಷಿಯನ್ ರೋಮನ್ ಸಾಮ್ರಾಜ್ಯದ ಇಡೀ ಪಶ್ಚಿಮ ಪ್ರದೇಶದ ಚಕ್ರವರ್ತಿಯಾದ. ಆದರೆ ಅದೇ ಸಮಯದಲ್ಲಿ ಅವನ ತಂದೆಯ ಸೈನ್ಯದ ಒಂದು ಭಾಗ ಬಂಡೆದ್ದು ಗ್ರೇಷಿಯನನ ನಾಲ್ಕು ವರ್ಷ ವಯಸ್ಸಿನ ಮಲತಮ್ಮ ವ್ಯಾಲೆಂಟಿಯನನ್ನು ಚಕ್ರವರ್ತಿಯನ್ನಾಗಿ ಘೋಷಿಸಿತು. ಗ್ರೇಷಿಯನ್ ಅವನನ್ನೂ ಚಕ್ರವರ್ತಿಯೆಂದು ಪುರಸ್ಕರಿಸಿ ಯುದ್ಧ ತಪ್ಪಿಸಿದ. ಅವನು ತನ್ನ ತಾಯಿಯೊಂದಿಗೆ ಮಿಲಾನ್ ನಗರದಿಂದ ಆಡಳಿತವನ್ನು ನಡೆಸುವಂತೆ ಏರ್ಪಡಿಸಿದ. ಒಟ್ಟಿನಲ್ಲಿ ರೋಮನ್ ಸಾಮ್ರಾಜ್ಯ ಗ್ರೇಷಿಯನ್, ವ್ಯಾಲೆಂಟಿನಿಯನ್, ಇವರಿಬ್ಬರ ಚಿಕ್ಕಪ್ಪನಾದ ವ್ಯಾಲೆನ್ಸ್ ಈ ಮೂವರು ಚಕ್ರವರ್ತಿಗಳ ಆಳ್ವಿಕೆಗೊಳಗಾಗಿತ್ತು.

	ರೈನ್ ಗಡಿಯಾಚೆಯ ಅನೇಕ ಅನಾಗರಿಕ ತಂಡಗಳು ಆಗಾಗ್ಗೆ ರೋಮನ್ ಸಾಮ್ರಾಜ್ಯದೊಳಗೆ ನುಗ್ಗಿ ಕಿರುಕುಳ ಕೊಡುತ್ತಿದ್ದವು. ಗ್ರೇಷಿಯನ್ ಆ ತಂಡಗಳನ್ನು ತಡೆದು ಅವುಗಳ ಉಪದ್ರವವನ್ನು ನಿವಾರಿಸುವುದರಲ್ಲೆ ಹೆಚ್ಚು ಕಾಲ ಕಳೆದ. ಆಗಾಗ ಇಟಲಿಗೆ ಬಂದು ಹೋಗುತ್ತಿದ್ದರೂ ಅವನ ಗಮನ ಗಾಲ್ ಪ್ರದೇಶದಲ್ಲಿ ಕೇಂದ್ರಿಕೃತವಾಗಿತ್ತು. ಈ ಮಧ್ಯೆ ಗಾತಿಕ್ ಬಣಗಳಿಂದ ಸಾಮ್ರಾಜ್ಯದ ಪ್ರಾಚ್ಯ ಭಾಗಗಳಿಗೆ ಉಪದ್ರವ ತಲೆದೋರಿತು. 378ರಲ್ಲಿ ಗ್ರೇಷಿಯನನ ಚಿಕ್ಕಪ್ಪನಾದ ವ್ಯಾಲೆನ್ಸ್ ಏಡ್ರಿಯಾನಿಪಲ್ ಕದನದಲ್ಲಿ ಅಜರೂಕತೆಯಿಂದ ಶತ್ರುಶಿಬಿರದ ಬಳಿಗೆ ಮಿತ ಬೆಂಗಾವಲು ಪಡೆಯೊಡನೆ ಮುಂದುವರಿದು ಗಾಯಗೊಂಡು ನರಳುತ್ತಿದ್ದಾಗ ಶತ್ರುಗಳು ಅವನ ಸಮೆತ ಆ ಪ್ರದೇಶವನ್ನೆಲ್ಲ ಬೆಂಕಿಗೆ ಆಹುತಿ ಮಾಡಿದರು. ಈ ಘಟನೆ ರೋಮನ್ ಸಾಮ್ರಾಜ್ಯದ ಪತನ ಸನ್ನಿಹಿತವಾಯಿತೆಂಬುದರ ಸೂಚನೆಯಾಗಿತ್ತೆಂದು ಹಲವು ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ವಾರ್ತೆ ಗ್ರೇಷಿಯನನಿಗೆ ತಲುಪಿದರೂ ಅವನು ದೂರದಲ್ಲಿದ್ದುದರಿಂದ ವ್ಯಾಲೆನ್ಸನ ಸಹಾಯಕ್ಕೆ ತತ್‍ಕ್ಷಣ ಧಾವಿಸಲಾಗಲಿಲ್ಲ.

	ಈ ದುರ್ಭರ ಸನ್ನಿವೇಶದಲ್ಲಿ ರೋಮನ್ ಸಾಮ್ರಾಜ್ಯದ ಪ್ರತಿಷ್ಠೆಯನ್ನು ಎತ್ತಿಹಿಡಿಯಲು ಗ್ರೇಷಿಯನ್ ನಿಶ್ಚಯಿಸಿದ. ಕ್ರೂರಿಗಳೂ ಯುದ್ಧಪ್ರಿಯರೂ ಆದ ಶತ್ರುಗಳನ್ನು ಅಡಗಿಸಲು ಸಾಹಸಿಯಾದ ನೇತಾರನ ಅವಶ್ಯಕತೆಯಿತ್ತು. ಗ್ರೇಷಿಯನನ ಆಳ್ವಿಕೆಯಲ್ಲಿದ್ದ ಪ್ರದೇಶಗಳು ಶತ್ರುಗಳ ದಾಳಿಗೆ ಒಳಗಾಗುತ್ತಿದ್ದುವಾದ್ದರಿಂದ ಈತ ಅಲ್ಲಿಂದ ಬಹುಕಾಲ ಕದಲುವಂತಿಲ್ಲ. ಗಾತಿಕ್ ಯುದ್ಧವನ್ನು ಮುಂದುವರಿಸಲು ಹೆಚ್ಚು ಕಾಲವೂ ಅನಿರ್ಬಂಧಿತ ಅಧಿಕಾರವೂ ದೃಢಮನಸ್ಸೂ ಅನಿವಾರ್ಯವಾಗಿ ಆವಶ್ಯಕವಾಗಿದ್ದವು. ತನ್ನ ಅಧಿಕಾರ ಮತ್ತು ಪ್ರತಿಷ್ಠೆಗಿಂತ ರೋಮನ್ ಸಾಮ್ರಾಜ್ಯದ ಗೌರವವನ್ನು ಕಾಪಾಡುವುದು ಅತಿ ಮುಖ್ಯ ಕರ್ತವ್ಯವೆಂದು ಈತ ಬಗೆದು, ವೀರಯೋಧನೊಬ್ಬನನ್ನು ಆರಿಸಿ ಅವನಿಗೆ ವ್ಯಾಲೆನ್ಸ್‍ನ ಪದವಿಯನ್ನು ಕೊಡಲು ತೀರ್ಮಾನಿಸಿದ. ಮುಂದೆ ರೋಂ ಹಾಗೂ ಕ್ಯಾಥೊಲಿಕ್ ಚರ್ಚ್ ಇತಿಹಾಸದ ಪ್ರಸಿದ್ಧ ವ್ಯಕ್ತಿಗಳಲ್ಲೊಬ್ಬನಾದ ತೀಯೊಡೋಷಿಯಸನ ವ್ಯಕ್ತಿತ್ವ ಗ್ರೇಷಿಯನನ ಗಮನ ಸೆಳೆಯಿತು. 379ರಲ್ಲಿ ಗ್ರೇಷಿಯನ್ ಅವನನ್ನು ಸಿರ್ಮಿಯಮಿಗೆ ಬರಮಾಡಿಕೊಂಡು ಅವನಿಗೆ ಥ್ರೇಸ್, ಏಷ್ಯ, ಈಜಿಪ್ಟ್ ಮತ್ತು ಮ್ಯಸಿಡೋನೊಯಗಳ ಆಡಳಿತ ವಹಿಸಿ ಸಾಮ್ರಾಜ್ಯ ಪದವಿಯನ್ನು ಕೊಟ್ಟು ಗೌರವಿಸಿ ಶತ್ರುಗಳನ್ನು ನಿಗ್ರಹಿಸುವ ಕಾರ್ಯವನ್ನು ಅವನಿಗೆ ವಹಿಸಿದ. ತನಗೆ ವಹಿಸಿದ ಜವಾಬ್ದಾರಿಯ ಕಾರ್ಯವನ್ನು ತೀಯೊಡೋಷಿಯಸ್ ಯಶಸ್ವಿಯಾಗಿ ನಿರ್ವಹಿಸಿದ. ಅವನು ಅನೇಕ ವರ್ಷಗಳ ಕಾಲ ನಿರಂತರವಾಗಿ ಹೋರಾಡಿ ಕೊನೆಗೆ 380ರಲ್ಲಿ ಶತ್ರುಗಳನ್ನು ಸಂಪೂರ್ಣವಾಗಿ ಸೋಲಿಸಿದ.

	ತನ್ನ ಆಳ್ವಿಕೆಯ ಉತ್ತರಾರ್ಧದಲ್ಲಿ ಗ್ರೇಷಿಯನನ ಜನಪ್ರಿಯತೆ ಕುಂದತೊಡಗಿತು. ಅವನು ಬಿಷಪ್ ಆಂಬ್ರೋಸನ ಪ್ರಭಾವಕ್ಕೊಳಗಾಗಿ ಅತ್ಯಂತ ಧಾರಾಳ ನೀತಿಯನ್ನನುಸರಿಸತೊಡಗಿದ. ಫಾಂಟಿಫೆಕ್ಸ್ ಮ್ಯಾಕ್ಸಿಮಸ್ ಎಂಬ ಬಿರುದನ್ನು ತ್ಯಜಿಸಿದ. ಅಲ್ಲದೆ ರೋಮನ್ ಸೆನೆಟ್ ಮುಂದಿದ್ದ ವಿಜಯ ಪ್ರತಿಮೆಯನ್ನು ತೆಗೆಯಲು ತೀರ್ಮಾನಿಸಿದ. ಅವನು ಈ ತೀರ್ಮಾನ ಬದಲಿಸುವಂತೆ ಸೆನೆಟ್ ಸದಸ್ಯರು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. 383ರಲ್ಲಿ ಅವನ ರಾಣಿಯದ ಕಾನ್‍ಸ್ಟೆಂಷಿಯಳು ಮರಣ ಹೊಂದಿದಳು. ಗ್ರೇಷಿಯನ್ ಬೇಟೆ ಮತ್ತು ಇತರ ವಿನೋದಗಳಲ್ಲಿ ಹೆಚ್ಚು ಕಾಲ ಕಳೆಯತೊಡಗಿದ. ಅವನ ಆಮೋದ ಪ್ರಮೋದಗಳಿಗೆ ಅವನ ಆಪ್ತ ಮಿತ್ರರು ಉತ್ತೇಜನ ಕೊಡುತ್ತಿದ್ದರು. ಗ್ರೇಷಿಯನ್ ತನ್ನ ಆಳ್ವಿಕೆಯ ಪ್ರಾರಂಭದಲ್ಲಿ ಸೈನಿಕರ ಮೇಲ್ವಿಚಾರಣೆ ಮತ್ತು ಅದರ ಮೇಲ್ಮೆಗೆ ಹೆಚ್ಚು ಗಮನ ನೀಡುತ್ತಿದ್ದ. ಕ್ರಮೇಣ ಇದರಿಂದ ವಿಮುಖನಾದ್ದರಿಂದ ಇವನ ಸೈನಿಕರಲ್ಲಿ ಅತೃಪ್ತಿ ಮೂಡಿತ್ತು. ಅಲ್ಲದೆ ತಾನು ಸೋಲಿಸಿದ ಸಿಥಿಯನ್ ಪಂಗಡದ ಒಂದು ಗುಂಪಿನವರನ್ನು ತನ್ನ ಅಂಗರಕ್ಷಕ ದಳಕ್ಕೆ ನೇಮಿಸಿಕೊಂಡು ಅವರೊಡನೆ ಸಲುಗೆಯಿಂದ ವರ್ತಿಸಲು ಪ್ರಾರಂಭಿಸಿದ. ಮಿಗಿಲಾಗಿ ತಾನೂ ಸಿಥಿಯನರ ಉಡಿಗೆ ತೊಡಲು ಪ್ರಾರಂಭಿಸಿದ. ಇದರಿಂದ ಇವನ ಸೈನಿಕರಲ್ಲೂ ಪ್ರಜೆಗಳಲ್ಲೂ ಅತೃಪ್ತಿ ಉಂಟಾಯಿತು.

	ಅತೃಪ್ತ ಸೈನಿಕರು 383ರಲ್ಲಿ ಬ್ರಿಟನಿನಲ್ಲಿದ್ದ ಗ್ರೇಷಿಯನನ ದಳಪತಿ ಮ್ಯಾಕ್ಸಿ ಮಸನನ್ನು ಸಮ್ರಾಟನನ್ನಾಗಿ ಘೋಷಿಸಿದರು. ಮ್ಯಾಕ್ಸಿಮಸ್ ಸೈನ್ಯ ಗಾಲ್ ಪ್ರದೇಶಕ್ಕೆ ನುಗ್ಗಿತು. ಇದನ್ನು ಎದುರಿಸಲು ಗ್ರೇಷಿಯನ್ ಪ್ಯಾರಿಸಿನವರೆಗೆ ಹೋದ. ಇವನ ಸೈನ್ಯ ಇವನನ್ನು ತ್ಯಜಿಸಿ ಮ್ಯಾಕ್ಸಿಮಸನ ಕಡೆಗೆ ಸೇರಿಕೊಂಡಿತು. ಗ್ರೇಷಿಯನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೊಲೆಗೆ ಈಡಾದ (383ರ ಆಗಸ್ಟ್ 25.

	ಗ್ರೇಷಸಿಯನ್ ಒಳ್ಳೆಯ ವಾಗ್ಮಿ, ಸಾಹಿತ್ಯಪ್ರಿಯ. ಯುದ್ಧ ಮತ್ತು ಬೇಟೆಯಲ್ಲಿ ಇವನಿಗೆ ವಿಶೇಷ ಅಭಿರುಚಿ ಇತ್ತು. ಆಶ್ವಾರೀಹಣ, ಬಿಲ್ಲು ವಿದ್ಯೆ, ಬರ್ಜಿ ಎಸೆತ ಮೊದಲಾದವುಗಳಲ್ಲಿ ಈತ ಪ್ರವೀಣನಾಗಿದ್ದ. ಸುಂದರವಾದ ಅರಮನೆಯನ್ನೂ ವಿಶಾಲವಾದ ಉದ್ಯಾನಗಳನ್ನೂ ಇವನು ನಿರ್ಮಾಣ ಮಾಡಿಸಿದ್ದ. ಪ್ರಾಣಿಗಳನ್ನು ಸಂಗ್ರಹಿಸುವುದರಲ್ಲೂ ಇವನಿಗೆ ವಿಶೇಷ ಆಸಕ್ತಿ ಇತ್ತು. ಇವನ ಸಂಗ್ರಹಾಲಯದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಮೃಗಪಕ್ಷಿಗಳಿದ್ದವು. ಈತ ಕ್ಯಾಥೊಲಿಕ್ ಪಂಥದ ನಮ್ರ ಅನುಯಾಯಿಯಾಗಿದ್ದ. ಆಪ್ರವರ್ಗದವರು ಇವನಲ್ಲಿದ್ದ ಹಲವು ದೋಷಗಳನ್ನು ಪ್ರಚೋದಿಸದೆ ಯೋಗ್ಯ ಸಲಹೆಗಳನ್ನು ನೀಡಿದ್ದ ಪಕ್ಷದಲ್ಲಿ ಗ್ರೇಷಿಯನ್ ಚಕ್ರವರ್ತಿ ಸಮರ್ಥ ರೋಮನ್ ಸಮ್ರಾಟರಲ್ಲೊಬ್ಬನಾಗುತ್ತಿದ್ದನರೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. 
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ